ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ನಮ್ಮ ಬಗ್ಗೆ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ

 

1963ರಲ್ಲಿ ಸರ್ಕಾರವು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ರದ್ದುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಒಂದು ಶಾಖೆಯನ್ನಾಗಿ ರೂಪಿಸಿತು. 1968ರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಎಂಬ ಈ ಶಾಖೆಯನ್ನು ಪಠ್ಯ ಪುಸ್ತಕ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು.

ಪ್ರತ್ಯೇಕ ಇಲಾಖೆ

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ, ಮತ್ತೆ ಪ್ರತ್ಯೇಕ ಇಲಾಖೆಯೊಂದು ರೂಪುಗೊಳ್ಳುವ ಪ್ರಕ್ರಿಯೆ ಆರಂಭವಾದದ್ದು, 1977ರಲ್ಲಿ. ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಷಯಗಳನ್ನು ನಿರ್ವಹಿಸುತ್ತಿದ್ದ ಪಠ್ಯ ಪುಸ್ತಕ ನಿರ್ದೇಶನಾಲಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಘಟಕದ ಮತ್ತು ಅಂದು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿ - ಇವುಗಳ ಕಾರ್ಯದಲ್ಲಿ ಏಕರೂಪತೆಯನ್ನು ತಂದು ಅವುಗಳ ಕಾರ್ಯಚಟುವಟಿಕೆಗಳು ಯೋಜಿತವಾಗಿ, ಸಮನ್ವಿತವಾಗಿ ನಡೆಸುವ ದೃಷ್ಟಿಯಿಂದ, ಪ್ರತ್ಯೇಕ ನಿರ್ದೇಶನಾಲಯವೊಂದನ್ನು 1977ರಲ್ಲಿ ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಮತ್ತು ಯುವಜನ ಸೇವಾ ಇಲಾಖೆಯ ಅಧೀನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವ್ಯವಹಾರಗಳ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು.

 

ಇಲಾಖೆಯ ಧ್ಯೇಯೋದ್ದೇಶಗಳು

1977ರಲ್ಲಿ ಈ ಸ್ಥಾಪಿತವಾದ ನಿರ್ದೇಶನಾಲಯದ ಪ್ರಕಾರ್ಯಗಳು ಮತ್ತು ಜವಾಬ್ದಾರಿಗಳು ಈ ಮುಂದಿನಂತಿದ್ದವು:- 

ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಆಡಳಿತ ಕನ್ನಡದ ಜಾರಿಗಾಗಿ ನಿಯೋಜಿತವಾಗಿದ್ದ ಭಾಷಾ ಮತ್ತು ಕನ್ನಡ ಅಭಿವೃದ್ಧಿ ಇಲಾಖೆಯು ನಿರ್ವಹಿಸುತ್ತಿದ್ದ, ಕನ್ನಡ ಅಭಿವೃದ್ಧಿಗೆ ಸಂಬಂಧಪಟ್ಟ ಕೆಲಸಕಾರ್ಯಗಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗೆ ವರ್ಗಾಯಿಸಿ, ಅದನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎಂದು ಮರುನಾಮಕರಣ ಮಾಡಲಾಯಿತು. ಹೀಗೆ 1977ರ ಆಗಸ್ಟ್ 31ರಂದು ಅಸ್ತಿತ್ವಕ್ಕೆ ಬಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ನಂತರ 1985ರಲ್ಲಿ ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಇಲಾಖೆಯ ಅಧೀನಕ್ಕೆ ಒಳಪಟ್ಟಿತು.

 


ಹೊಸ ಸಚಿವಾಲಯ

ಸರ್ಕಾರದ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಚಿವಾಲಯದ ಅಗತ್ಯ ಕಂಡು ಬಂದುದರಿಂದ 1993ರಲ್ಲಿ ಸರ್ಕಾರದ ಮಟ್ಟದಲ್ಲಿಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೃಜನೆಗೊಂಡಿತು.


ಮುನ್ನಡೆ

ಇಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಬೃಹತ್ತಾಗಿ ಬೆಳೆದು ವ್ಯಾಪಕವಾಗಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಜಿಲ್ಲಾ ಮಟ್ಟದಲ್ಲಿ, ವಿಭಾಗ ಮಟ್ಟದಲ್ಲಿ ಕಚೇರಿಗಳನ್ನು ಹೊಂದಿದ್ದು, ಗ್ರಾಮ ಮಟ್ಟದಿಂದ ರಾಜಧಾನಿಯ ಮಟ್ಟದವರೆಗೆ ತನ್ನ ಚಟುವಟಿಕೆಗಳನ್ನು ನಡೆಸುತ್ತಲಿದೆ. ಆಡಳಿತ ಭಾಷೆಯಾಗಿ ಕನ್ನಡವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ, ಸಂವರ್ಧಿಸುವ ಕಾರ್ಯವನ್ನು ಹೊತ್ತಿರುವ ಇಲಾಖೆಯು ಈ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾದ ದೃಢ ಹೆಜ್ಜೆಗಳನ್ನು ಇಡುತ್ತಾ, ಮುನ್ನಡೆಯುತ್ತಿದೆ.

×
ABOUT DULT ORGANISATIONAL STRUCTURE PROJECTS