ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ಭಾಷಾಭಿವೃದ್ಧಿ ಯೋಜನೆಗಳು

ಕನ್ನಡ ಅಭಿವೃದ್ಧಿ

ಕನ್ನಡವನ್ನು ಆಡಳಿತದ ಎಲ್ಲ ಹಂತಗಳಲ್ಲೂ ಬಳಕೆಗೆ ತರಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳೆಂದರೆ-

 

ಸಿಬ್ಬಂದಿಗೆ ಆಡಳಿತ ಕಾರ್ಯಶಿಬಿರ

ಆರು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿವಿಧ ಸರ್ಕಾರಿ ಕಚೇರಿಯ ಸಿಬ್ಬಂದಿಗೆ ಒಟ್ಟಾರೆ ಕಚೇರಿ ವ್ಯವಹಾರದಲ್ಲಿ ಕನ್ನಡ ಬಳಕೆ ಕುರಿತಂತೆ ತರಬೇತಿ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 2 ಶಿಬಿರಗಳು. ಅಲ್ಲದೆ ಕೇಂದ್ರ ಕಚೇರಿಯಿಂದ ಅಗತ್ಯಕ್ಕನುಗುಣವಾಗಿ ನಡೆಸಲಾಗುವುದು.


ನ್ಯಾಯಾಂಗ ಇಲಾಖೆಬ್ಯಾಂಕಿಂಗ್ ಕ್ಷೇತ್ರ ಹಾಗೂ ಮಹಾಲೇಖಪಾಲರ ಕಚೇರಿ ಸಿಬ್ಬಂದಿಗೆ ಕಾರ್ಯಶಿಬಿರಗಳು

ಆಯಾ ಇಲಾಖೆಯ ಸಿಬ್ಬಂದಿಗೆ, ತಮ್ಮ ಇಲಾಖೆಯಲ್ಲಿ ದೈನಂದಿನ ಆಡಳಿತದಲ್ಲಿ ಕನ್ನಡ ಬಳಸಲು ಅಗತ್ಯವಾದ ತಿಳುವಳಿಕೆ ನೀಡುವ ಕಾರ್ಯಶಿಬಿರಗಳನ್ನು ಏರ್ಪಡಿಸಲಾಗುತ್ತದೆ.


ಅಂಚೆ ಮೂಲಕ ಕನ್ನಡ ಕಲಿಕೆ

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಹಕಾರದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಮತ್ತು ಕಾರ್ಖಾನೆಗಳ ಸಿಬ್ಬಂದಿ, ಹತ್ತು ತಿಂಗಳ ಅವಧಿಯಲ್ಲಿ ಅಂಚೆ ಮೂಲಕ ಕನ್ನಡ ಕಲಿಯಬಹುದಾಗಿದೆ.


ಕನ್ನಡ ಬಾರದವರಿಗೆ ಕನ್ನಡ ಕಲಿಕೆ

ಈ ತರಬೇತಿಯ ಅವಧಿ ಆರು ತಿಂಗಳು. ಕನ್ನಡ ಓದು-ಬರಹ-ಮಾತು ಈ ಮೂರೂ ಹಂತಗಳಲ್ಲಿ ವ್ಯಾವಹಾರಿಕ ಕನ್ನಡವನ್ನು ನಿಗಮ, ಅರೆ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆ/ಉದ್ದಿಮೆಗಳ ನೌಕರರಿಗೆ, ಸಾರ್ವಜನಿಕರಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ಕಲಿಸಲಾಗುತ್ತಿದೆ.

ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿನ ಯೋಜನೆ ಜಾರಿಯಲ್ಲಿದೆ.


ಅಧೀನ ಕಚೇರಿಗಳಿಗೆ ಕಂಪ್ಯೂಟರ್ ಪೂರೈಕೆ

ಕಚೇರಿ ವ್ಯವಹಾರವನ್ನು ಆಧುನಿಕ ಯುಗಕ್ಕೆ ಸಜ್ಜುಗೊಳಿಸಲು, ಇ-ಆಡಳಿತವನ್ನು ಜಾರಿಗೆ ತರಲು ಹಾಗೂ ಹೆಚ್ಚು ವ್ಯವಸ್ಥಿತವಾಗಿ ಕೆಲಸವನ್ನು ನಿರ್ವಹಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ದೇಶನಾಲಯದ ಎಲ್ಲ ಅಧೀನ ಕಚೇರಿಗಳಿಗೆ ಹಾಗೂ ಕೇಂದ್ರ ಕಚೇರಿಗೆ ಹಂತಹಂತವಾಗಿ ಕಂಪ್ಯೂಟರನ್ನು ಪೂರೈಸಲಾಗುವುದು.


ಪೂರಕ ಸಾಹಿತ್ಯ ಸರಬರಾಜು

ಕಚೇರಿಗಳ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಕೆಗೆ ಅನುಕೂಲವಾಗುವಂತೆ ಮಾದರಿ ಕಚೇರಿ ಕೈಪಿಡಿ, ಆಡಳಿತ ಪದಕೋಶ ಮುಂತಾದ ಪೂರಕ ಸಾಹಿತ್ಯವನ್ನು ಪೂರೈಸಲಾಗುತ್ತದೆ.

 

ಅಂತರಜಾಲ

ನಿರ್ದೇಶನಾಲಯದಲ್ಲಿ ಅಳವಡಿಸಲಾಗಿರುವ ಗಣಕಯಂತ್ರಕ್ಕೆ ಅಂತರಜಾಲ ಸಂಪರ್ಕ ಕಲ್ಪಿಸಿದ್ದು, ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ. ಆಸಕ್ತರು www.http:kar.nic.in/samskruthi ಮೂಲಕ ಸಂಪರ್ಕಿಸಬಹುದು.

 

ಬೋಧಕರ ಕಾರ್ಯಾಗಾರ

ಕನ್ನಡ ಬಾರದವರಿಗೆ ಕನ್ನಡ ಕಲಿಸುವವರ ಕೊರತೆಯಿದೆ ಎಂಬ ದೂರು ವ್ಯಾಪಕವಾಗಿದೆ. ಅಲ್ಲದೆ ಅನೇಕ ಕನ್ನಡ ಸಂಘ-ಸಂಸ್ಥೆಗಳು ಕನ್ನಡ ಬಾರದವರನ್ನು ಒಂದುಗೂಡಿಸಿ ಬೋಧಕರನ್ನು ಒದಗಿಸುವಂತೆ ಕೋರುತ್ತದೆ. ಅವರ ಬೇಡಿಕೆಯನ್ನು ಪೂರೈಸಲು, ಅಲ್ಲದೆ ಇಲಾಖೆಯು ಕನ್ನಡ ಕಲಿಸಲು ಹೊಸ ಬೋಧಕರನ್ನು ಸಿದ್ಧಪಡಿಸುವ ಮೂಲಕ ಹೆಚ್ಚು ಜನರಿಗೆ ನಿರ್ದಿಷ್ಟ ಬೋಧನಾ ಕ್ರಮದಲ್ಲಿ ಕನ್ನಡ ಕಲಿಸುವ ಆಶಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಕಲಿಸುವ ಬೋಧಕರಿಗೆ ತರಬೇತಿ ನೀಡಿ ಸಜ್ಜುಗೊಳಿಸುವ ಯೋಜನೆ ಇದಾಗಿದೆ.


ಕನ್ನಡದ ಕಣ್ಮಣಿ

ಆಕಾಶವಾಣಿ ಸಹಯೋಗದೊಂದಿಗೆ ಕನ್ನಡದ ಪ್ರಾಚೀನ ಆಧುನಿಕ ಕನ್ನಡ ಕವಿ-ಕಾವ್ಯವನ್ನು ಕನ್ನಡ ಜನತೆಗೆ ಪರಿಚಯಿಸುವ ಅಪೂರ್ವ ಕಾರ್ಯಕ್ರಮ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿ ತಿಂಗಳು ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ ಮನೆಯಂಗಳದ ಮಾತುಕತೆ ಸರಣಿಯನ್ನು ರಾಜ್ಯವ್ಯಾಪಿ ಪ್ರಸಾರ ಮಾಡುವ ನಿಟ್ಟಿನಲ್ಲಿ ಈ ಬಾರಿ ಕನ್ನಡದ ಕಣ್ಮಣಿ ಸರಣಿಯಲ್ಲಿ ಇಲಾಖೆಯಲ್ಲಿ ಲಭ್ಯವಿರುವ ಮನೆಯಂಗಳದಲ್ಲಿ ಮಾತುಕತೆ ಸರಣಿಯ ಧ್ವನಿಮುದ್ರಿಕೆಯನ್ನು ಪ್ರಸಾರಕ್ಕೆ ಅಳವಡಿಸಿ 30 ಕಂತುಗಳ ಒಳಗೊಂಡ ಕಾರ್ಯಕ್ರಮವನ್ನು ಆಕಾಶವಾಣಿ ಮೂಲಕ ಪ್ರಸಾರ ಮಾಡಲಾಗುತ್ತಿದೆ.


ಅಖಿಲ ಭಾರತ ಭಾಷಾ ಸೌಹಾರ್ದ ಕಾರ್ಯಕ್ರಮ

ಕನ್ನಡದ ಕವಿ, ಸರ್ವಜ್ಞನ ಪ್ರತಿಮೆಯನ್ನು ಚೆನ್ನೈನಲ್ಲೂ, ತಮಿಳಿನ ಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲೂ ಸ್ಥಾಪಿಸಿದ ಸಂದರ್ಭದ ಸ್ಮರಣಾರ್ಥವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿವರ್ಷ ಆಗಸ್ಟ್ 13ರಂದು ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಸಂವಾದಗೋಷ್ಠಿ ಹಾಗೂ ಕನ್ನಡ ಭಾಷೆ, ಕನ್ನಡದ ಸೋದರ ಭಾಷೆಗಳು ಮತ್ತು ಭಾರತೀಯ ಇತರೆ ರಾಜ್ಯದ ಭಾಷೆಗಳ ಕವಿಗಳನ್ನೊಳಗೊಂಡ ಬಹುಭಾಷಾ ಕವಿಗೋಷ್ಠಿಯನ್ನು ನಡೆಸಲಾಗುತ್ತದೆ.

ಭಾರತೀಯ ಭಾಷೆಗಳ ನಡುವಿನ ಬಾಂಧವ್ಯವನ್ನು ಸಾಂಸ್ಕೃತಿಕವಾಗಿ ಬೆಸೆಯುವ ದಿಸೆಯಲ್ಲಿ ಇದೊಂದು ಯಶಸ್ವಿ ಕಾರ್ಯಕ್ರಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ 2014ರ ಆಗಸ್ಟ್ 13 ರಂದು ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆಯನ್ನು ಬೆಂಗಳೂರಿನ ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ ಏರ್ಪಡಿಸಿದ್ದು ಅಂದು ಬೆಳಗ್ಗೆ ಸಂಸ್ಕೃತಿ ಸಹಸ್ಪಂದನ ಎಂಬ ಸಂವಾದ ಗೋಷ್ಠಿಯನ್ನು ಮತ್ತು ಮಧ್ಯಾಹ್ನ ಬಹುಭಾಷಾ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ಕನ್ನಡ ಭಾಷೆ, ಸೋದರ ಭಾಷೆಗಳು ಹಾಗೂ ಭಾರತದ ಇತರ ರಾಜ್ಯದ ಭಾಷೆಗಳ ಲೇಖಕರು ಪಾಲ್ಗೊಳ್ಳಲಿದ್ದಾರೆ.


ಕನ್ನಡ ತಂತ್ರಾಂಶ ಅಭಿವೃದ್ಧಿ

* ಡಾ|| ಕೆ.ಚಿದಾನಂದಗೌಡ, ಮಾಜಿ ಕುಲಪತಿಗಳು ಇವರ ಅಧ್ಯಕ್ಷತೆಯಲ್ಲಿ ದಿನಾಂಕ:1.12.2008 ರಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯನ್ನು ರಚಿಸಿದ್ದು, ಸದರಿ ಸಮಿತಿಯು 2010ರ ಮೇನಲ್ಲಿ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಲಾಗಿತ್ತು. ವರದಿಯಲ್ಲಿ 10 ಅಂಶಗಳ ಅಭಿವೃದ್ದಿಗೆ ಶಿಫಾರಸು ಮಾಡಿದೆ.

* ಕನ್ನಡ ತಂತ್ರಾಂಶ ಅಭಿವೃದ್ದಿ ಸಮಿತಿಯ ಶಿಫಾರಸ್ಸುಗಳ ವರದಿಯಂತೆ ಆದ್ಯತೆಯ ಮೇರೆಗೆ ಟೆಂಡರ್ ಕರೆದು ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು, ಹಾಸನ ಇವರಿಗೆ ಅ) ಪರಿವರ್ತಕಗಳು, ಆ) ಯೂನಿಕೋಡ್ ಫಾಂಟ್ಸ್, ಇ) ಮೊಬೈಲ್ ದೂರವಾಣಿಯಲ್ಲಿ ಕನ್ನಡ ಬಳಕೆ, ಈ) ಬ್ರೈಲ್ ತಂತ್ರಾಂಶಗಳನ್ನು ಸಿದ್ಧಪಡಿಸಲು ಸಂಸ್ಥೆಗೆ ಆದೇಶ ನೀಡಲಾಗಿದ್ದು, ಸದರಿ ನಾಲ್ಕು ಕನ್ನಡ ತಂತ್ರಾಂಶಗಳ ಬೀಟಾ ಆವೃತ್ತಿಯನ್ನು ಸಂಸ್ಥೆಯವರು ಸಿದ್ಧಪಡಿಸಿ ಇಲಾಖೆಗೆ ನೀಡಿರುತ್ತಾರೆ.

* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಭಿವೃದ್ಧಿಪಡಿಸಿರುವ ಪರಿವರ್ತಕಗಳು, ಯೂನಿಕೋಡ್ ಅಕ್ಷರ ವಿನ್ಯಾಸಗಳು, ಮೊಬೈಲ್ ದೂರವಾಣಿ, ಬ್ರೈಲ್‍ಕನ್ನಡ ತಂತ್ರಾಂಶಗಳ ಬೀಟಾ ಆವೃತ್ತಿ ಸಿದ್ಧಗೊಂಡಿದ್ದು, ಸದರಿ ತಂತ್ರಾಂಶಗಳ ಬೀಟಾ ಆವೃತ್ತಿಯನ್ನು ದಿನಾಂಕ:22.01.2014ರಂದು ಮಾನ್ಯ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಳಿಸಲಾಯಿತು.

* ಕನ್ನಡ ಯೂನಿಕೋಡ್ ತಂತ್ರಾಂಶಗಳ ಬೀಟಾ ಆವೃತ್ತಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ/ಅನಿಸಿಕೆಗಳನ್ನು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಲಾಗಿತ್ತು. ಅದರಂತೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವೆಬ್‍ಸೈಟ್ ಮೂಲಕ ಕಳುಹಿಸಿದ್ದು, ಆ ಅಭಿಪ್ರಾಯ/ಅನಿಸಿಕೆಗಳ ಮಾಹಿತಿಯನ್ನು ದಿನಾಂಕ:7.3.2014ರಂದು ನಡೆದ ಸಭೆಯ ಗಮನಕ್ಕೆ ತಂದು ಸಭೆಯಲ್ಲಿ ತೀರ್ಮಾನಿಸಿದಂತೆ, ತಂತ್ರಾಂಶಗಳ ಬೀಟಾ ಆವೃತ್ತಿಯಲ್ಲಿ ಮಾಹಿತಿಯನ್ನು ಮಾರ್ಪಡಿಸಿ, ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು, ಹಾಸನ ಇವರು ಪೂರ್ಣಾವೃತ್ತಿಯನ್ನು ಸಿದ್ಧಪಡಿಸಿರುತ್ತಾರೆ. ಸದರಿ ಅಂತಿಮ ಆವೃತ್ತಿಯನ್ನು ದಿನಾಂಕ:4.07.2014ರಂದು ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಞಛಿiಣನಲ್ಲಿ ಅಳವಡಿಸಲಾಗಿದೆ.

* ಮೊಬೈಲ್‍ನಲ್ಲಿ ಕನ್ನಡ ಬಳಕೆಯ ತಂತ್ರಾಂಶ: ಆ್ಯಂಡ್ರಾಯ್ಡ್ ಮೊಬೈಲ್ ದೂರವಾಣಿಗಳಿಗಾಗಿ ಯೂನಿಕೋಡ್ ಆಧಾರದ ಟಚ್‍ಸ್ಕ್ರೀನ್ ಕೀಲಿಮಣೆ ವಿನ್ಯಾಸವನ್ನು ಹೊಂದಿರುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಸದರಿ ತಂತ್ರಾಂಶದ ಬಳಕೆ ಮಾಡಿಕೊಂಡು ಮೊಬೈಲ್ ಸಾಧನದಲ್ಲಿ ಸಂದೇಶಗಳನ್ನು ಕನ್ನಡದಲ್ಲಿಯೂ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್ ಆವೃತ್ತಿ 2.3.1. ಮೇಲ್ಪಟ್ಟ ಎಲ್ಲಾ ಆವೃತ್ತಿಗಳಲ್ಲಿ ಮೊಬೈಲ್ ಆ್ಯಪ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಆ್ಯಂಡ್ರಾಯ್ಡ್ ತಂತ್ರಾಂಶದ ಅಂತಿಮ ಆವೃತ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳಿಂದ ದಿನಾಂಕ:19.07.2014ರಂದು ಬಿಡುಗಡೆಗೊಳಿಸಲಾಗಿದೆ.

* ಪ್ರಸಕ್ತ ವರ್ಷದಲ್ಲಿ ಮುಖ್ಯವಾಗಿ ಅಕ್ಷರ ಜಾಣ ಅಥವಾ ಓ.ಸಿ.ಆರ್. ಮತ್ತು ಲಿನೆಕ್ಸ್ ಆಧಾರಿತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಇ-ಟೆಂಡರ್ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗುತ್ತಿದೆ.


ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ

* ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಬೆಂಗಳೂರಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದು, ಆಡಳಿತ ಮಂಡಳಿ ಮತ್ತು ತಜ್ಞರ ಸಮಿತಿ ರಚಿಸಲಾಗಿದೆ.

* ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಆಡಳಿತಾತ್ಮಕ ಸಿಬ್ಬಂದಿಯನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

* ಅಲ್ಲದೆ, ಪ್ರತ್ಯೇಕವಾಗಿ ರಾಜ್ಯ ಸರ್ಕಾರದಿಂದಲೇ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ತೆರೆಯಲು ಉದ್ದೇಶಿಸಿ ಇಲಾಖೆಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ರೂ.1.00ಕೋಟಿಗಳ ಅನುದಾನವನ್ನು ಅವಕಾಶ ಮಾಡಿಕೊಳ್ಳಲಾಗಿದೆ

 

×
ABOUT DULT ORGANISATIONAL STRUCTURE PROJECTS