ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ವಿಶೇಷ ಘಟಕ

ವಿಶೇಷ ಘಟಕ ಯೋಜನೆಗಳು

ನಾಡಿನಲ್ಲಿ ವಾಸವಾಗಿರುವ ಶೋಷಿತ, ದಮನಿತ, ನಿರ್ಲಕ್ಷಿತ ಸಮುದಾಯಕ್ಕೆ ವಿಶೇಷ ಪ್ರೋತ್ಸಾಹ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶದಿಂದ ಸರ್ಕಾರವು ವಿಶೇಷ ಘಟಕ ಯೋಜನೆ ಎಂಬ ಲೆಕ್ಕ ಶೀರ್ಷಿಕೆಯಡಿ ವಿಶೇಷ ನಿಧಿಯನ್ನು ಸ್ಥಾಪಿಸಿ, ಪ್ರತ್ಯೇಕ ಅನುದಾನವನ್ನು ಮಂಜೂರು ಮಾಡಿ, ಪರಿಶಿಷ್ಟ ವರ್ಗದ(ಎಸ್.ಸಿ) ಕಲಾವಿದರು ಮತ್ತು ಸಂಸ್ಥೆಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಮತ್ತು ಆರ್ಥಿಕ ನೆರವನ್ನು ಒದಗಿಸುತ್ತಿದೆ.

ವಿಶೇಷ ಘಟಕ ಯೋಜನೆಯಡಿಯಲ್ಲಿ ಜನಪರ ಉತ್ಸವಗಳು, ಕನ್ನಡ ಭಾಷೆಯಲ್ಲಿ ಎಂ.ಫಿಲ್ ಮತ್ತು ಪಿ.ಎಚ್.ಡಿ ಸಂಶೋಧನಾ ಪ್ರಬಂಧ ರಚಿಸಿದ ಪರಿಶಿಷ್ಟ ಪಂಗಡದ ಸಂಶೋಧಕರಿಗೆ ಹಸ್ತಪ್ರತಿ ಮುದ್ರಣಕ್ಕೆ ಧನಸಹಾಯ, ಪರಿಶಿಷ್ಟ ವರ್ಗದ ಸಂಗೀತ ಕಲಾವಿದರು ಮತ್ತು ಜನಪದ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣ ಖರೀದಿ ನೆರವು, ಪರಿಶಿಷ್ಟ ವರ್ಗದ ಸಂಸ್ಥೆಗಳಿಗೆ ಧನಸಹಾಯ ಯೋಜನೆಗಳು, ಸಂಗೀತ, ನೃತ್ಯ, ಶಿಲ್ಪಕಲೆ, ಜನಪದ ತರಬೇತಿ ಕಾರ್ಯಕ್ರಮಗಳಿಗೆ ಗುರು-ಶಿಷ್ಯ ಪರಂಪರೆಯ ಅಡಿಯಲ್ಲಿ ಗುರುಕುಲ ಮಾದರಿಯ ಶಿಕ್ಷಣಕ್ಕೆ ಅನುದಾನ ನೀಡಲಾಗುತ್ತಿದೆ.ರಾಜ್ಯದ ಪರಿಶಿಷ್ಟ ಜಾತಿ/ಪಂಗಡಗಳ ಕಲಾವಿದರು, ಲೇಖಕರು ಹಾಗೂ ಸಾಂಸ್ಕೃತಿಕ ಪರ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

 

ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜನೆ:

೧.ಪರಿಶಿಷ್ಟ ಜಾತಿ/ಪಂಗಡಗಳಲ್ಲಿ ಅಸಂಖ್ಯಾತ ಜಾನಪದ ಕಲಾವಿದರು, ಕಲಾಪ್ರಕಾರಗಳು ಹಾಸುಹೊಕ್ಕಾಗಿವೆ. ಅವಕಾಶವಿಲ್ಲದೆ ಸಾಕಷ್ಟು ಕಲಾವಿದರಿಗೆ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ. ಇಂತಹ ಕಲಾಪ್ರಕಾರಗಳಿಗೆ, ಕಲಾವಿದರಿಗೆ ಅವಕಾಶ ನೀಡುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಇಲಾಖೆಯ ಮೂಲಕ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುವುದು.

೨.ಪರಿಶಿಷ್ಟ ಜಾತಿ/ಪಂಗಡಗಳ ಸಂಘ ಸಂಸ್ಥೆಗಳು ಏರ್ಪಡಿಸುವ ಸಾಂಸ್ಕೃತಿಕ ಉತ್ಸವಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುವುದು.

೩.ಇಲಾಖೆಯ ಸಾಂಸ್ಕೃತಿಕ ಸೌರಭ ಯೋಜನೆಯಡಿ ಹಾಗೂ ತಾವೇ ಸಂಘಟಿಸುವ ಕಾರ್ಯಕ್ರಮಗಳಡಿ ಈ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಗುವುದು.

 

ಸಂಗೀತ ತರಬೇತಿ

೧.ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ಅವರು ವ್ಯಾಸಂಗ ಮಾಡುತ್ತಿರುವ ವಸತಿನಿಲಯಗಳಲ್ಲಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ, ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯಸಂಗೀತ, ಗಮಕ ಕಲೆಗಳಲ್ಲಿ ತರಬೇತಿ ನೀಡಲಾಗುವುದು.

೨.ಜಾನಪದ ಕಲಾ ತರಬೇತಿ : ಸಂಗೀತ ತರಬೇತಿಯ ರೀತಿಯಲ್ಲೇ ಜಾನಪದ ನೃತ್ಯ, ವಾದ್ಯ ಮತ್ತು ಸಂಗೀತ ಕಲಾಪ್ರಕಾರಗಳಲ್ಲಿ ಆಸಕ್ತ ಯುವಜನರನ್ನು ಆಯ್ಕೆ ಮಾಡಿಕೊಂಡು ಈ ತರಬೇತಿ ನೀಡಲಾಗುವುದು.

 

ಸಾಂಸ್ಕೃತಿಕ ಪರಿಕರಗಳಿಗೆ ಧನಸಹಾಯ

ಪರಿಶಿಷ್ಟ ಜಾತಿ/ಪಂಗಡದ ಕಲಾವಿದರು ಅಥವಾ ಸಂಘ ಸಂಸ್ಥೆಗಳಿಗೆ ಅವುಗಳ ಕಲಾಪೋಷಣೆಗೆ ಅಗತ್ಯವೆನಿಸುವ ವಾದ್ಯಪರಿಕರಗಳನ್ನು, ರಂಗಪರಿಕರಗಳನ್ನು, ವೇಷಭೂಷಣಗಳನ್ನು ಹಾಗೂ ಪೀಠೋಪಕರಣಗಳನ್ನು ಖರೀದಿಸಲು ಧನ ಸಹಾಯ ನೀಡಲಾಗುವುದು.

 

ಸಾಂಸ್ಕೃತಿಕ ಮಂದಿರ ನಿರ್ಮಾಣ

ಪರಿಶಿಷ್ಟ ಜಾತಿ/ಪಂಗಡದ ನೋಂದಾಯಿತ ಸಂಸ್ಥೆಗಳು ತಮ್ಮ ಸಾಂಸ್ಕೃತಿಕ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಿ, ವಿಸ್ತಾರಗೊಳಿಸುವ ಸಲುವಾಗಿ ಇವುಗಳಿಗೆ ಸ್ವಂತ ನಿವೇಶನ ಇದ್ದರೆ, ಆ ನಿವೇಶನದಲ್ಲಿ ಸಾಂಸ್ಕೃತಿಕ ಮಂದಿರಗಳನ್ನು ನಿರ್ಮಿಸಲು ಧನಸಹಾಯ ನೀಡಲಾಗುವುದು.

 

ಸಾಂಸ್ಕೃತಿಕ ಉತ್ಸವ, ವಿಚಾರ ಸಂಕಿರಣಗಳಿಗೆ ಧನಸಹಾಯ

ಪರಿಶಿಷ್ಟ ಜಾತಿ/ಪಂಗಡದ ಕಲಾವಿದರಿಗೆ ನೋಂದಾಯಿತ ಸಂಘ ಸಂಸ್ಥೆಗಳು ಏರ್ಪಡಿಸುವ ಕಲಾಮೇಳ, ಸಾಂಸ್ಕೃತಿಕ ಉತ್ಸವ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲು ಧನಸಹಾಯ ನೀಡಲಾಗುವುದು.

×
ABOUT DULT ORGANISATIONAL STRUCTURE PROJECTS